ಭದ್ರ ಸುಪರ್ದು   - 
ಬ್ಯಾಂಕಿನಲ್ಲಿ ಇದು ವಿಶಿಷ್ಟವಾದಂತಹ ಸೇವೆಯಾಗಿದೆ.  ಬ್ಯಾಂಕು ಪ್ರಾರಂಭವಾದ ಕಾಲದಲ್ಲಿ ಅಂದರೆ ಕ್ರಿಸ್ತ ಪೂರ್ವ ಕಾಲದಲ್ಲಿ ಗ್ರೀಕ್, ರೋಮನ್ ನಂತರ ಇತರ ಯುರೋಪಿಯನ್ ದೇಶಗಳಲ್ಲಿ ಬ್ಯಾಂಕಿನ ಮುಖ್ಯ ಕಾರ್ಯವೆಂದರೆ ಸಾರ್ವಜನಿಕ ಅಮೂಲ್ಯ ವಸ್ತುಗಳನ್ನು ಭದ್ರ ಸುಪರ್ದುಗೆ ತೆಗೆದುಕೊಂಡು ಅದಕ್ಕೆ ಶುಲ್ಕವಿಧಿಸುವುದಾಗಿತ್ತು. ಇದೊಂದೇ ಇಂದಿನವರೆಗು ಹಾಗೆಯೇ ಉಳಿದಿರುವುದು. ಇದರಲ್ಲಿ ಎರಡು ವಿಧ. ಭದ್ರ ಸುಪರ್ದುಗೆ ಬಹಳ ಮಹತ್ವದ ದಾಖಲೆಗಳನ್ನು ಸ್ವೀಕರಿಸುವುದು ಒಂದು ಹಾಗು ಭದ್ರ ಸುಪರ್ದು ಇಟ್ಟುಕೊಳ್ಳಲು ಗ್ರಾಹಕರಿಗೆ ಒಂದು ಕಪಾಟು ನೀಡುವುದು ಇನ್ನೊಂದು. 

	ಭದ್ರ ಸುಪರ್ದು ಸೇವೆಯು ಗ್ರಾಹಕರಿಗೆ ಬಹಳ ಅನುಕೂಲಕರವಾದುದು ಹಾಗು ಇದರ ಸೇವಾ ಶುಲ್ಕವೂ ಬಹಳ ಕಡಿಮೆ ಇರುತ್ತದೆ. ಆದರೆ ಇದರಲ್ಲಿ ಬೆಲೆಬಾಳುವ ಚಿನ್ನ, ಬೆಳ್ಳಿ, ಆಭರಣಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಬಹಳ ಅಮೂಲ್ಯದ ದಾಖಲೆ ಪತ್ರಗಳನ್ನು, ಆಸ್ತಿ ಪತ್ರಗಳನ್ನು ಸ್ವೀಕರಿಸ ಲಾಗುವುದಿಲ್ಲ. ಯಾವುದಕ್ಕೆ ಲಾಕರ್‍ನ ಅವಶ್ಯಕತೆಯಿಲ್ಲವೋ ಆದರೆ ಬಹಳ ಭದ್ರವಾಗಿ ಕಾದಿಡಬೇಕೋ ಅಂತಹವುಗಳನ್ನು ಕಾಪಾಡಲು ಭದ್ರ ಸುಪರ್ದು ಬಹಳ ಉಪಯುಕ್ತ. ಉದಾಹರಣೆಗೆ, ಬ್ಯಾಂಕಿನ ಠೇವಣಿ ಮಾಡಿದ್ದಕ್ಕೆ ನೀಡುವ ಠೇವಣಿ ರಸೀದಿಯನ್ನು ಕಾರಣಾಂತರದಿಂದ ಬ್ಯಾಂಕಿನ ವ್ಯವಹಾರಕ್ಕೆ ತಕ್ಷಣ ಬೇಕಾಗಬಹುದು ಅಥವಾ ಅಂತಹ ಒಂದೆರಡು ಪತ್ರಗಳಿಗಾಗಿ ಲಾಕರ್ ಕೊಳ್ಳುವುದು ಅನವಶ್ಯಕವೆನಿಸಬಹುದು. ಅಂತರ ಸಂದರ್ಭದಲ್ಲಿ ಭದ್ರ ಸುಪರ್ದು ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು. 

	ಲಾಕರ್‍ನಲ್ಲಿಡುವ ವಸ್ತುಗಳ ಬಗ್ಗೆ ಬ್ಯಾಂಕರ್‍ನಿಗೆ ಯಾವ ಮಾಹಿತಿಯೂ ಇರುವುದಿಲ್ಲ. ಆ ಬಗ್ಗೆ ಅವನು ತಿಳಿದಿರಲೂ ಬಾರದು. ಆದರೆ ಈ ಭದ್ರ ಸುಪರ್ದುವಿನಲ್ಲಿ ಬ್ಯಾಂಕರ್‍ನಿಗೆ ಭದ್ರ ಸುಪರ್ದುವಿಗಾಗಿ ಇಟ್ಟಿರುವುದೇನು ಎಂಬುದು ತಿಳಿದಿರುತ್ತದೆ.  ಹೀಗೆ ಸ್ವೀಕರಿಸಿರುವುದನ್ನು ಬ್ಯಾಂಕು ತನ್ನ ನಗದು ಇಡುವ ಭದ್ರ ಕಪಾಟಿನಲ್ಲಿ ಇಡಬಹುದು ಅಥವಾ ಇಂತಹುದಕ್ಕಾಗಿ ಇಟ್ಟುಕೊಂಡಿರುವ ಲಾಕರ್‍ನಲ್ಲಿ ಇಡಬಹುದು.  
ಬ್ಯಾಂಕರ್‍ನಿಗೆ ಲಕೋಟೆಯಲ್ಲಿಟ್ಟಿರುವ ಅಡಕ ಪತ್ರದ ಮಾಹಿತಿ ಇರಬೇಕು.
ತನ್ನಲ್ಲಿಡಲು ಬಂದಿರುವ ವಸ್ತುಗಳ/ಪತ್ರಗಳ ಪಟ್ಟಿಯನ್ನು ದ್ವಿಪತ್ರಿಯಲ್ಲಿ ಮಾಡಿ ಮೂಲ ಪ್ರತಿಯನ್ನು ಬ್ಯಾಂಕಿನ ಅಧಿಕೃತ ಮೊಹರಿನೊಂದಿಗೆ ಮಾಡಿ ಗ್ರಾಹಕನಿಗೆ ನೀಡಿ ಅದರ ಎರಡನೇ ಪ್ರತಿಯನ್ನು ಲಕೋಟೆಯ ಜತೆಗೆ ಇಡಬೇಕು.
ಪ್ರತಿಯೊಂದು ಅಂತಹ ಲಕೋಟೆಯನ್ನು ಕ್ರಮ ಸಂಖ್ಯೆಯಲ್ಲಿ ಗುರುತು ಹಾಕಿ ಅದಕ್ಕೆಂದೇ ಇರುವ ಪುಸ್ತಕದಲ್ಲಿ ಸವಿವರದೊಂದಿಗೆ ಬರೆದು ಸಹಿ ಹಾಕಬೇಕು. 

ಗ್ರಾಹಕನು ತನ್ನ ಲಕೋಟೆನ್ನು ಹಿಂಪಡೆಯುವಾಗ ಮೂಲ ಪ್ರತಿಯನ್ನು ಬ್ಯಾಂಕಿಗೆ ವಾಪಸ್ಸು ಕೊಡಬೇಕು. ಅದನ್ನು ನಕಲು ಪ್ರತಿಯೊಂದಿಗೆ ಹೋಲಿಸಲಾಗುವುದು. ಭದ್ರ ಸುಪರ್ದು ರಿಜಿಸ್ಟರಿನಲ್ಲಿ ಹಿಂಪಡೆಯುವವನ ಸಹಿ ಪಡೆಯಬೇಕು. ಗ್ರಾಹಕನು ತನ್ನ ಪ್ರತಿನಿಧಿಯನ್ನು ಕಳಿಸಿದ್ದಲ್ಲಿ ಆ ಬಗ್ಗೆ ಅಧಿಕೃತ ಅಧಿಕಾರ ಪತ್ರವಿರಬೇಕು ಅಲ್ಲದೆ ಬಂದ ಪ್ರತಿನಿಧಿಯ ಸಹಿಯನ್ನು ಗ್ರಾಹಕನು ದೃಢೀಕರಿಸಿರಬೇಕು. 

ಭಾರತೀಯ ಕರಾರು ಕಾಯಿದೆ, 1872 ಕಲಂ 151ರ ಅನ್ವಯ ಬ್ಯಾಂಕರನು ಮಾರಿಫತ್ತುದಾರ ಅಥವಾ ಜಮಾನತುದಾರ (ಃಚಿiಟee) ನಿಂದ ಪಡೆದುದನ್ನು ತಾನು ಅಮಾನತುದಾರ ಅಥವಾ ಜಮಾನತುದಾತ (ಃಚಿiಟoಡಿ) ಸ್ಥಾನದಲ್ಲಿದ್ದು ಅದಕ್ಕೆ ಸಂಬಂಧ ಪಟ್ಟಂತೆ ರಕ್ಷಣಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಆಗಲೇ ಬ್ಯಾಂಕಿಗೆ ಇದೇ ಕಾಯಿದೆಯ ಕಲಂ 152ರ ಶಾಸನ ಬದ್ಧ ರಕ್ಷಣೆಯು ದೊರಕುವುದು.

ಈ ಎಲ್ಲ ಗ್ರಾಹಕ ಸೇವೆಗಳಿಂದ ಬ್ಯಾಂಕಿಗೆ ಭಾವೀ ಗ್ರಾಹಕರು ಸಾಕಷ್ಟು ಸಂಖ್ಯೆಯಲ್ಲಿ ಬಂದು ಬ್ಯಾಂಕಿನ ಇತರ ವ್ಯವಹಾರ, ವಹಿವಾಟುಗಳು ಹೆಚ್ಚಲು ಸಹಾಯಕವಾಗುತ್ತದೆ.
(ಜಿ.ಆರ್.ವಿ; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ